ಹರಿಹರ ಅಭೇದ ಭಗವಾನ್ ನಾರಾಯಣನು ತನ್ನ ದಿವ್ಯ ವೈಕುಂಠದಲ್ಲಿ ನಿದ್ರಿಸುತ್ತಿದ್ದಾಗ ಕೋಟಿಕೋಟಿ ಚಂದ್ರರ ಕಾಂತಿಯಿಂದ ಯುಕ್ತನೂ, ತ್ರಿಶೂಲ, ಡಮರು ಧಾರಿಯೂ ಸ್ವರ್ಣಾಭೂಷಣಗಳಿಂದ ವಿಭೂಷಿತನೂ ಸುರೇಂದ್ರವಂದಿತನೂ ಅಣಿಮಾದಿ ಸಿದ್ದಿಗಳಿಂದ ಸುಸೇವಿವತನೂ ಆದ ತ್ರಿಲೋಚನ ಭಗವಾನ್ ಶಿವನು ನೃತ್ಯ ಮಾಡತೊಡಗಿದ್ದನ್ನು ಸ್ವಪ್ನದಲ್ಲಿ ಕಂಡನು. ಆಗ ಅವನು ಎಚ್ಚತ್ತು, ಭಗವತಿ ಲಕ್ಷ್ಮೀದೇವಿಗೆ ಈ ಸಂಗತಿಯನ್ನು ತಿಳಿಸಿ, ತನ್ನ ಸ್ಮರಣೆ ಮಾಡುತ್ತಿರುವ ಕೈಲಾಸ ಪತಿಯನ್ನು ಭೆಟ್ಟಿಯಾಗಬೇಕೆಂಬ ಇಚ್ಛೆಯಿಂದ ಕೈಲಾಸಕ್ಕೆ ಪತ್ನೀಸಹಿತನಾಗಿ ತೆರಳಿದನು. ಆಗ ಅವನಿಗೆ ಮಾರ್ಗದಲ್ಲಿಯೆ ಭಗವಾನ್ ಚಂದ್ರಶೇಖರನು ಭಗವತಿ ಉಮಾದೇವಿಯೊಡನೆ ದರ್ಶನ ಕೊಟ್ಟನು. ಶಿವನ ಸ್ವಪ್ನದಲ್ಲಿ ಭಗವಾನ್ ವಿಷ್ಣುವು ದರ್ಶನ ಕೊಟ್ಟದ್ದರಿಂದ ಅವನು ವಿಷ್ಣುವಿನ ಭೆಟ್ಟಿಗಾಗಿ ಕೈಲಾಸದಿಂದ ವೈಕುಂಠಕ್ಕೆ ಹೊರಟನು. ಅವರಿಬ್ಬರೂ ಆನಂದದಿಂದ ಮಾತಾಡತೊಡಗಿದರು. ಇಬ್ಬರೂ ತಮ್ಮ ತಮ್ಮ ಸ್ವಪ್ನದ ಸಂಗತಿಯನ್ನು ತಿಳಿಸಿದರು. ಇಬ್ಬರ ನೇತ್ರಗಳಲ್ಲಿಯೂ ಆನಂದಾಶ್ರುಗಳು ಹರಿಯತೊಡಗಿದವು. ಆಗ ಪರಸ್ಪರರು ತಮ್ಮ ಲೋಕಕ್ಕೆ ಬರಬೇಕೆಂದು ಆಗ್ರಹದಿಂದ ಹೇಳತೊಡಗಿದರು. ಅವರ ಸಂಭಾಷಣೆಯನ್ನು ಕೇಳಿ ಭಗವತಿ ಉಮಾದೇವಿಯು ಉಭಯತರನ್ನುದ್ದೇಶಿಸಿ ಮಾತಾಡತೊಡಗಿದಳು : "ನಾಥಾ, ಕೇಶವಾ, ನಿಮ್ಮಿಬ್ಬರ ನಿಶ್ಚಲ ಪ್ರೇಮವ...